
ಮೇರಿ ಕೋಮ್ (Mary Kom), ದೇಶದ ಹೆಮ್ಮೆಯ ಚಾಂಪಿಯನ್ ಬಾಕ್ಸರ್. ಆರು ಬಾರಿ ವಿಶ್ವ ಚಾಂಪಿಯನ್, ಒಲಿಂಪಿಕ್ ಕಂಚಿನ ಪದಕ ವಿಜೇತೆ ಹತ್ತಾರು ಜಾಗತಿಕ ಪ್ರಶಸ್ತಿಗಳನ್ನ ಗೆದ್ದು ಬೀಗಿರುವ ಗಟ್ಟಿಗಿತ್ತಿ. ದೇಶದ ಕೀರ್ತಿ ಪತಾಕೆಯನ್ನ ಹಾರಿಸಿದ್ದ MC ಮೇರಿ ಕೋಮ್ ವಿರುದ್ಧ ಕೆಲವು ಅಪಹಾಸ್ಯಗಳು ಹರಿದಾಡುತ್ತಿವೆ. ಇದೀಗ ಅದೆಲ್ಲದಕ್ಕೂ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.
ಹೌದು, ಅವರು ತಮ್ಮ ವೈಯಕ್ತಿಕ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಮಣಿಪುರಿ ಓನ್ಲರ್ ( K Onler Kom) ಜೊತೆ ದಾಂಪತ್ಯ ಜೀವನ ನಡೆಸಿದ್ದ ಅವರು, ಇದೀಗ ವಿಚ್ಛೇದನ ಪಡೆದು ಪ್ರತ್ಯೇಕವಾಗಿದ್ದಾರೆ. ಮೊದಲ ಬಾರಿಗೆ ಡಿವೋರ್ಸ್ ವಿಚಾರದ ಮಾತನ್ನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 43 ವರ್ಷಕ್ಕೆ ಪ್ರಶಾಂತ್ ತಮಾಂಗ್ ಹಠಾತ್ ನಿಧನ.. ಕಾನ್ಸ್ಟೇಬಲ್ ಆಗಿದ್ದ ಇವರು ಜನಪ್ರಿಯತೆ ಗಳಿಸಿದ್ದೇಗೆ?
/fit-in/580x348/filters:format(webp)/newsfirstlive-kannada/media/media_files/2026/01/11/mary-kom-2026-01-11-18-00-04.jpg)
ಮೇರಿ ಕೋಮ್ ನೋವಿನ ನಿವೇದನೆ
ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನ್ನಾಡಿರುವ ಮೇರಿ ಕೋಮ್, ನಾನು ಏನನ್ನು ಅನುಭವಿಸಿದೆ ಎಂಬುದರ ಬಗ್ಗೆ ತಿಳಿಯದೇ ನನಗೆ ದುರಾಸೆ ಎಂದು ಕರೆಯುತ್ತಾರೆ. ಹೌದು, ನಾನೀಗ ಪತಿ ಓನ್ಲರ್‌ನಿಂದ ಬೇರ್ಪಟ್ಟಿದ್ದೇನೆ. ಇದೆಲ್ಲವೂ ಎರಡು ವರ್ಷಗಳ ಹಿಂದೆ ನಡೆದು ಹೋಗಿದೆ.
ನಾನು ಕ್ರೀಡೆಯಲ್ಲಿ ಬ್ಯುಸಿಯಾಗಿದ್ದಾಗ, ಹಣಕಾಸಿನ ವಿಷಯಗಳಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅದೇ ಕಾರಣಕ್ಕೆ ಎಲ್ಲವೂ ಸರಿಯಾಗಿಯೇ ಇತ್ತು. 2022ರ ಕಾಮನ್‌ವೆಲ್ತ್ ಗೇಮ್ಸ್‌ಗಿಂತ ಮೊದಲು ಗಾಯಗೊಂಡೆ. ಆಗಲೇ ನಿಜ ಪರಿಸ್ಥಿತಿ ಅರ್ಥವಾಯಿತು.
ನಾನು ನಂಬಿದ್ದ ವ್ಯಕ್ತಿ..
ಅಂದು ನಾನು ಹಲವು ತಿಂಗಳು ಹಾಸಿಗೆ ಹಿಡಿದಿದ್ದೆ. ನಡೆಯೋಕೆ ಸಾಧ್ಯವಾಗದ ಕಾರಣ ವಾಕರ್ ಬಳಸಿದೆ. ಆ ಸಮಯದಲ್ಲೇ ನಾನು ನಂಬಿದ್ದ ವ್ಯಕ್ತಿ ಅಂದುಕೊಂಡಂತೆ ಇರಲಿಲ್ಲ. ಆಗ ಅರಿವಾಯಿತು. ಆದರೆ ಈ ವಿಷಯ ಜಗತ್ತಿಗೆ ತಮಾಷೆಯಾಗಿ ಕಾಣೋದು ಇಷ್ಟ ಇರಲಿಲ್ಲ. ಹಾಗಾಗಿ ನಮ್ಮಿಬ್ಬರ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದೆ. ಅದು ಸಾಧ್ಯವಾಗದಿದ್ದಾಗ, ನಾನು ವಿಚ್ಛೇದನಕ್ಕೆ ಮುಂದಾದೆ.
ಎರಡೂ ಕುಟುಂಬಕ್ಕೆ ನನ್ನ ನಿರ್ಧಾರವನ್ನು ತಿಳಿಸಿದೆ. ಅದನ್ನು ಎರಡೂ ಕುಟುಂಬ ಅರ್ಥಮಾಡಿಕೊಂಡಿತು. ಆದರೆ ವಿಷಯ ಖಾಸಗಿಯಾಗಿ ಉಳಿಯುತ್ತದೆ ಎಂದು ಭಾವಿಸಿದ್ದೆ. ಕಳೆದ ಒಂದು ವರ್ಷದಿಂದ ನನ್ನ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವ ಪ್ರಯತ್ನಗಳು ನಡೆದವು. ಇದಕ್ಕೆ ಪ್ರತಿಕ್ರಿಯಿಸಬಾರದು ಅಂದುಕೊಂಡಿದ್ದೆ. ಆದರೆ ನನ್ನ ಮೌನವನ್ನು ತಪ್ಪಾಗಿ ಅರ್ಥೈಸಲಾಯಿತು.
ಹಣ ವಸೂಲಿಗೆ ಭೂಗತ ತಂಡ ಬಂದಿತ್ತು..
ಪತಿ ಮಣಿಪುರಿ ಓನ್ಲರ್ ಸಾಲವನ್ನು ಮಾಡುತ್ತಲೇ ಇದ್ದ. ನನ್ನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಅದನ್ನೂ ಅಡ ಇಟ್ಟಿದ್ದ. ಅಲ್ಲದೇ ಚುರಾಚಂದ್‌ಪುರದ ಸ್ಥಳೀಯರಿಂದ ಸಹ ಸಾಲವನ್ನ ಪಡೆದಿದ್ದ. ಸ್ಥಳೀಯರು ಹಣವನ್ನ ವಸೂಲಿ ಮಾಡಲು ಭೂಗತ ತಂಡಗಳ ಮೂಲಕ ಜಮೀನನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ನಾನು ವಿಚಾರಿಸಿದಾಗ ಆರೋಪವನ್ನು ನಿರಾಕರಿಸಿದರು.
2022ರ ಮಣಿಪುರ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಾನೇ ಅವನ ಒತ್ತಾಯಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ಕೇವಲ ನನ್ನ ಮತ್ತು ಅವನ ನಡುವೆ ನಡೆದ ಖಾಸಗಿ ಚರ್ಚೆಗಳನ್ನು ಈಗಲೂ ಕೆಲ ಪತ್ರಿಕೆಗಳಿಗೆ ನೀಡಲಾಗುತ್ತಿದೆ. ನನ್ನನ್ನು ಒಬ್ಬ ವಿಲನ್ ತರಹ ಬಿಂಬಿಸಿ, ನನ್ನ ಚಾರಿತ್ರ್ಯವನ್ನು ಪ್ರಶ್ನಿಸಲಾಗುತ್ತಿದೆ. ಯಾವುದೋ ಒಂದು ಹಂತದಲ್ಲಿ ನಾನು ಇದಕ್ಕೆ ಪ್ರತಿಕ್ರಿಯಿಸಲೇಬೇಕಿತ್ತು..
ಸಾಧನೆಗಳಿಂದ ಏನು ಪ್ರಯೋಜನ?
ಮೇರಿ ಕೋಮ್ ತಮ್ಮ ಸಾಧನೆಗಳಿಂದ ಏನು ಪ್ರಯೋಜನ? ಏನು ಲಾಭ? ನಾನು ಒಳಗಿನಿಂದ ಸಂಪೂರ್ಣವಾಗಿ ಕುಸಿದುಹೋಗಿದ್ದೇನೆ. ಆದರೆ ನನಗೆ ದುಃಖಿಸಲು ಪುರುಸೊತ್ತಿಲ್ಲ. ಏಕೆಂದರೆ ನಾನು ನಾಲ್ಕು ಮಕ್ಕಳನ್ನು ನೋಡಿಕೊಳ್ಳಬೇಕು. ನನ್ನ ಮೇಲೆ ಅವಲಂಬಿತರಾಗಿರುವ ಪೋಷಕರಿದ್ದಾರೆ.
ಅಪಪ್ರಚಾರ ಮಾಡುತ್ತಿರೋರ ವಿರುದ್ಧ ಯಾವುದೇ ಪೊಲೀಸ್ ಕ್ರಮ ಕೈಗೊಂಡಿಲ್ಲ. ಅದು ನನಗೆ ಇಷ್ಟವಿಲ್ಲ. ದಯವಿಟ್ಟು ನನ್ನನ್ನು ನೆಮ್ಮದಿಯಿಂದ ಇರಲು ಬಿಡಿ. ಅಪಪ್ರಚಾರ ನಿಲ್ಲಿಸಿ. ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಅಥ್ಲೆಟ್ಸ್ ಕಮಿಷನ್ ಮುಖ್ಯಸ್ಥೆಯೂ ಆಗಿರುವ ನಾನು, ಮಕ್ಕಳಿಗಾಗಿ ಮನಸ್ಸು ಗಟ್ಟಿ ಮಾಡಿಕೊಂಡಿದ್ದೇನೆ. ಜಾಹೀರಾತುಗಳು ಹಾಗೂ ವಾಣಿಜ್ಯ ಪ್ರದರ್ಶನಗಳ ಮೂಲಕ ಮತ್ತೆ ಆರ್ಥಿಕವಾಗಿ ಸಬಲಳಾಗಲು ಪ್ರಯತ್ನಿಸುತ್ತಿದ್ದೇನೆ.
ಮೇರಿಕೋಮ್ ಒಬ್ಬ ತಾಯಿಯಾಗಿ, ಮಕ್ಕಳಿಗಾಗಿ ಕಷ್ಟ ಪಡುತ್ತಿದ್ದಾರೆ. ಎಷ್ಟು ಕಷ್ಟಕರವಾಗಿದೆ ಎಂಬುದು ದೇವರಿಗೆ ಗೊತ್ತು. ಮಕ್ಕಳಿರುವಾಗ ಸೋತು ಕುಳಿತುಕೊಳ್ಳಲು ಸಾಧ್ಯವೇ? ನಾನು ಮತ್ತೆ ಎದ್ದು ನಿಲ್ಲಲೇಬೇಕು. ನಾನು ಹೋರಾಡುತ್ತಲೇ ಇರುತ್ತೇನೆ. ನನ್ನ ಜೀವನವು ಒಂದು ಸುದೀರ್ಘ ಬಾಕ್ಸಿಂಗ್ ಪಂದ್ಯದಂತಿದೆ. ದೇವರಿದ್ದಾನೆ. ಅವನು ನನಗೆ ಶಕ್ತಿ ನೀಡುವ ಭರವಸೆಯಿದೆ.
ಮೇರಿ ಕೋಮ್, ಬಾಕ್ಸರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.
Previous Article
ಮನೆ ಕಟ್ಟಲು ಅಗೆಯುತ್ತಿದ್ದಾಗ ಸಿಕ್ಕೇ ಬಿಡ್ತು ನಿಧಿ.. ಪ್ರಾಮಾಣಿಕತೆ ಮೆರೆದರೂ ಕುಟುಂಬಕ್ಕೆ ಎದುರಾಯ್ತು ಗಂಡಾಂತರ..!
Next Article
43 ವರ್ಷಕ್ಕೆ ಪ್ರಶಾಂತ್ ತಮಾಂಗ್ ಹಠಾತ್ ನಿಧನ.. ಕಾನ್ಸ್ಟೇಬಲ್ ಆಗಿದ್ದ ಇವರು ಜನಪ್ರಿಯತೆ ಗಳಿಸಿದ್ದೇಗೆ?